ಖಾಲಿ…! ಖಾಲಿ!

ಅಕ್ಟೋಬರ್ 4, 2011

ಆತ್ಮಸಖ ದಿವ್ಯಸುಖ..
ಆಗಿತ್ತು…ಈಗಿಲ್ಲ…
ಕೆದಕಿದರೆ ಹಿತವಲ್ಲ…
ನೆನಪುಗಳಿಗೆ ಕೊನೆಯಿಲ್ಲ…
ಹಿಂದಿಕ್ಕಿ…ಮುಂದೋಡಿ,
ಮೇಲೇರಿ…ಕೆಳಜಾರಿ,
ಕಳೆದ ಘಳಿಗೆಗಳಲ್ಲಿ,
ಪಡೆದ ಅನುಭವಗಳೆಲ್ಲ,
ಖಾಲಿ…ಖಾಲಿ.

ಹಗಲಿರುಳು ಅರಿವಿಲ್ಲ…
ಒಲವಿರದೆ ಬದುಕಿಲ್ಲ…
ನಡೆವ ಹಾದಿಗಳಲ್ಲಿ,
ನುಡಿದ ಮಾತುಗಳಿಲ್ಲ!
ಕನಸುಗಳಿಗೆ ಕದವಿಕ್ಕಿ,
ಕಣ್ಮುಚ್ಚಿ, ಎದೆಬಿಚ್ಚಿ,
ಬಿಡುವಿರದೆ ಹಿಡಿದದ್ದು…
ಖಾಲಿ…ಖಾಲಿ!

Advertisements

ಸ್ವಗತ…!

ಸೆಪ್ಟೆಂಬರ್ 15, 2011

ಮರೆತಿರುವ ಒಲವ ನೆನಪು, ಕದಸರಿಸಿ ಒಳನಸುಳಿ
ಕುಣಿಯುತಿದೆ… ಕೆನೆಯುತಿದೆ…!

ಮನವೇ, ಬೆಚ್ಚಗಿರಲಿ ನನ್ನ ಪ್ರೀತಿ…
ಮುಚ್ಚಿಬಿಡು…ಮರೆತುಬಿಡು…
ಮೊಳೆ ಜಡಿದುಬಿಡು…
ಸ್ಥಿರ ಸಮಾಧಿಗಲ್ಲ…ಬೆಳೆದರೆ ಬೆಲೆಯಿಲ್ಲ.

ಕಿರುಗುಡುವ ಕದದ ಸದ್ದು,
ಕರೆಯುತಲಿದೆ…ಯಾರೋ ಬಂದಂತೆ,
ಹಸಿ ಮೌನ… ನಿಟ್ಟುಸಿರು…
ಹುಸಿ ಜಗಳ, ಬಿಸಿ ನೆನಪು,
ಮನದ ಮೂಲೆಯಲ್ಲೆಲ್ಲೋ ಮಂಗನಾಟ!


ಹಿತವಾದ ಸುಖ…!

ಮಾರ್ಚ್ 26, 2011

ಮುಲ್ಲ ಯಾವಾಗಲೂ ಮನೋಹರ..ನಿಂತರೆ ಚಂದ..ನಡೆದರೆ ಚಂದ…ನಕ್ಕರೆ ಅಂದ…ಯಾವಾಗಲೂ ಕಣ್ಣಿಗೆ ಮತ್ತು ಮನಸ್ಸಿಗೆ ಉಲ್ಲಸವನ್ನುಂಟು ಮಾಡುವ, ಮಗುವಿನಂತಿರುವ ಆಕೃತಿ. ಸಿಟ್ಟು ಮಾಡಿಕೊಂಡರೂ ಮುದ್ದಿಸಬೇಕೆನಿಸುವಂತೆ ಮಾಡುವ, ನಗುವಾಗ ಓಡಿ ಅಪ್ಪಿಕೊಳ್ಳಬೇಕಿನಿಸುವ ಮುಲ್ಲನ ಮುದ್ದು ಮಖ, ಯಾರನ್ನು ಆಕರ್ಷಿಸದೆ ಬಿಡುವುದಿಲ್ಲ. ಆತನೇನು ಸುರ ಸುಂದರಾಂಗ ಏನಲ್ಲ. ಆದರೆ ಸದಾ ಕಾಲ ಸಹಜವಾಗಿರುವ ಅವನಲ್ಲಿ ನಿಜ ಪ್ರಕೃತಿಯ ಸರಳ ಸೌಂದರ್ಯ ಮೇಳೈಸಿ ಅಧ್ಬುತ ಕಾಂತಿಯನ್ನು ಅವನಲ್ಲಿ ಮೂಡಿಸಿದೆ. ಯಾರಿಗೂ ನೀನು ತಪ್ಪು ಮಾಡಿದೆ ಎನ್ನುವುದಿಲ್ಲ… ಅಥವಾ ನೀನು ಹಾಗೆ ಮಾಡಬೇಕಿತ್ತು ಹೀಗೆ ಮಾಡಬೇಕಿತ್ತು ಎನ್ನುತ್ತಾ ತನ್ನ ಅರಿವನ್ನು ಇತರರ ಮೇಲೆ ಹೇರುವುದೂ ಇಲ್ಲ. ಬಂದಿದ್ದನ್ನು ಬಂದ ಹಾಗೆ ಒಪ್ಪಿಕೊಳ್ಳುತ್ತಾ, ನಗುತ್ತಾ, ನಗಿಸುತ್ತಾ, ಯಾರನ್ನು ಯಾವುದಕ್ಕೂ ದೋಷಿಸದೆ, ಮುಕ್ತವಾಗಿ ತನಗೆ ಅನಿಸಿದ್ದನ್ನು ಮಾಡುತ್ತಾ ಬದುಕುತ್ತಿರುತ್ತಾನೆ.

ಅದೊಂದು ದಿನ ಬೆಳಗಿನ ಚುಮು ಚುಮು ಚಳಿ…ಜನಗಳೆಲ್ಲ ಕೈ ಕಾಲುಗಳನ್ನು ಜಾಡಿಸುತ್ತಾ, ವ್ಯಯಾಮಕ್ಕೋ, ವಾಯುಸೇವೆನೆಗೋ… ಅಥವಾ ಅವರದೇ ಆದ ಕೆಲಸಗಳ ಮೇಲೆ ಓಡಾಟ ಆರಂಭಿಸಿದ್ದರು. ಸೂರ್ಯ ಇನ್ನು ಹುಟ್ಟಿರಲಿಲ್ಲ…ಮಬ್ಬುಗತ್ತಲೆ ಸಂಪೂರ್ಣವಾಗಿ ಮರೆಯಾಗಿರಲಿಲ್ಲ. ಸುತ್ತಲಿನ ವಾತಾವರಣವೆಲ್ಲ, ನಿಷ್ಯಬ್ದದಲ್ಲೇ ಸೌಂದರ್ಯವನ್ನು ಗುಣಿಸುತ್ತಾ ಹಾಯಾಗಿತ್ತು. ಮನಸ್ಸಿನ್ನು ಸಂಪೂರ್ಣ ಜಾಗೃತಾವಸ್ಥೆಗೆ ಬಂದಿರದ ಕಾರಣ, ಹಳೆಯ ನೆನಪುಗಳು ಅಥವಾ ಹೊಸ ಕನಸುಗಳ ಚಕ್ರ ಸರಿಯಾಗಿ ಶುರುವಾಗಿರದೆ, ಆ ಕ್ಷಣದ ಏಕಾಂತದ ಅನುಭಾವದಲ್ಲಿ ತನ್ನೊಳಗಿನ ಆತ್ಮೀಯತೆಯ ಅನುಭವ, ಪ್ರತಿಯೊಬ್ಬರನ್ನು ಮುಕ್ತತೆಯ ಸುಖವನ್ನ ಅನುಭವಿಸುವಂತೆ ಮಾಡಿತ್ತು. ದ್ವೇಷ ಪ್ರೀತಿಯಿಲ್ಲದ ನಿರ್ವಿಕಾರವಾದ ಆ ಸುಂದರ ಕ್ಷಣಗಳು ಸಮಯದೊಡನೆ ಜಾರಿಹೋಗುವ ಮುನ್ನ, ಜನರೆಲ್ಲರೂ ಅಚ್ಚರಿಯಿಂದ ವಿಚಿತ್ರವೊಂದನ್ನು ನೋಡಿದರು.

ಎಲ್ಲರ ಪ್ರೀತಿಯ ಮುಲ್ಲ ಎಂಟು ಇಂಚಿನ ಶೂ ಧರಿಸಿ ತುಂಬಾ ಕಷ್ಟಪಟ್ಟು ಕುಂಟುತ್ತಾ, ಕಾಲನ್ನು ಎಳೆಯುತ್ತ, ನೋವಿನ ಭಾಧೆಯನ್ನು ಕಷ್ಟಪಟ್ಟು ಸಹಿಸುತ್ತಾ, ನಡೆದೇ ತೀರಬೇಕೆನ್ನುವ ಹಠದಲ್ಲಿ ನಡೆಯುತ್ತಿದ್ದ. ಅಸಲಿಗೆ ಮುಲ್ಲನ ಪಾದದ ಅಳತೆ ಹತ್ತು ಇಂಚು…ಆದರೆ ಅಷ್ಟು ಚಿಕ್ಕ ಅಳತೆಯ ಶೂ ಧರಿಸಿ ನೋವು ತಿನ್ನುತ್ತಾ ನಡೆಯುತ್ತಿದ್ದ ಮುಲ್ಲನನ್ನು ಕುತೂಹಲದಿಂದ ಗಮನಿಸುತ್ತಿದ್ದ ಜನ, ತಡೆಯಲಾರದೆ ಕೇಳಿಯೇಬಿಟ್ಟರು.

“ಮುಲ್ಲ, ಇದೇನಾಗಿದೆ ನಿನಗೆ? ನಿನ್ನ ಕಾಲಿನಳೆತೆಯ ಪಾದರಕ್ಷೆ ಇದ್ದರೂ, ಏಕೆ ಈ ಚಿಕ್ಕದ್ದನ್ನು ಧರಿಸಿ ಹೀಗೆ ಕಷ್ಟಪಡುತ್ತಿರುವೆ?”

ಮುಲ್ಲ ಮಾತನಾಡಲಿಲ್ಲ…ಜನರ ಮಾತು ಕೇಳಿಸದವನಂತೆ ಸುಮ್ಮನೆ ಮುಲುಗುತ್ತಾ, ನೋವಿನಿಂದ ಚೀರುತ್ತಾ ನಡೆಯುತ್ತಲೇ ಇದ್ದ. ಇದನ್ನು ನೋಡುತ್ತಿದ್ದ ಜನ ಸುಮ್ಮನಿರಲಾಗದೆ ಮುಲ್ಲನನ್ನು ಅಡ್ಡಗಟ್ಟಿ ನಿಲ್ಲಿಸಿ ಪುನಃ ಕೇಳಿದರು.

“ಮುಲ್ಲ, ನೀನು ಉತ್ತರಿಸುವವರೆಗೆ ನಿನ್ನನ್ನು ಮುಂದೆ ಹೋಗಲು ಬಿಡುವುದಿಲ್ಲ. ಈ ಚಿಕ್ಕ ಪಾದರಕ್ಷೆಯ ಬದಲು ನೀನು ಬರಿಗಾಲಲ್ಲಿ ಹೋದರು ನಿನಗೆ ಇಷ್ಟೊಂದು ನೋವಾಗುವುದಿಲ್ಲ. ಆದರು ಏಕೆ ಈ ರೀತಿ ನಿನ್ನನ್ನೇ ನೀನು ಹಿಂಸಿಸಿಕೊಳ್ಳುತ್ತಿರುವೆ…ದಯವಿಟ್ಟು ಕಾರಣ ತಿಳಿಸು”

ಮುಲ್ಲ ನಿಂತ…ಸುತ್ತಲಿನ ಜನರನ್ನೆಲ್ಲ ಸುಮ್ಮನೆ ನೋಡಿದ…ಎಲ್ಲರ ಮುಖದ ಮೇಲಿದ್ದ ಪ್ರಶ್ನಾರ್ಥಕ ಗೆರೆಗಳು, ಅವನಲ್ಲಿ ಮುಗುಳ್ನಗೆ ಮೂಡಿಸಿದವು. ಸಂದಿಗ್ಧವಿಲ್ಲದ ಮುಲ್ಲನ ಮುಖದ ಮುಕ್ತ ಭಾವ, ಸುತ್ತಲ ಜನರಿಗೆ ಯಾವ ಉತ್ತರವನ್ನು ಊಹಿಸಲು ಅವಕಾಶವನ್ನೇ ಕೊಡಲಿಲ್ಲ. ಕೊನೆಗೆ ಮುಲ್ಲ ತಾನು ಚಿಕ್ಕ ಪಾದರಕ್ಷೆ ಧರಿಸಿ ಅನುಭವಿಸುತ್ತಿದ್ದ ಹಿಂಸೆಯ ಕಾರಣವನ್ನು ಹೇಳಿದ.

“ಹೀಗೆ ಚಿಕ್ಕ ಪಾದರಕ್ಷೆ ಧರಿಸಿ ಹಿಂಸೆ ಪಡುತ್ತ ನಡೆಯುತ್ತಿದ್ದರೆ ನೋವಾಗುತ್ತದೆ ನಿಜ. ಆದರೆ ಜಾಗ ಸೇರಿದ ಮೇಲೆ, ಪಾದರಕ್ಷೆ ಬಿಚ್ಚಿ ಪಾದದ ಮೇಲೆ ಕೈಯಾಡಿಸುವಾಗ ಉಂಟಾಗುವ ಸುಖ ವರ್ಣನೆಗೆ ನಿಲುಕದ್ದು. ಆ ರೋಮಾಂಚನಕ್ಕೆ, ಮುಂದೆ ಸಿಗುವ ಆ ಅಪರಿಮಿತ ಸಂತೋಷವನ್ನು ಅನುಭವಿಸುವುದಕ್ಕೆ ಈಗ ನಾನು ನೋವಿನಿಂದ ಸಾಗುತ್ತಿದ್ದೇನೆ.”

ಎಂದು ಹೇಳಿ, ಪುನಃ ನಡೆಯಲಾರಂಭಿಸಿದ. ಆದರೆ ಜನ ಮುಲ್ಲನ ಉತ್ತರವನ್ನು ಕೇಳಿ ಗೊಳ್ಳನೆ ನಕ್ಕುಬಿಟ್ಟರು. ಸುಮ್ಮನಿರದೆ, ಮುಲ್ಲನಿಗೆ ಬುದ್ದಿ ಕೆಟ್ಟಿದೆಯೇನೋ ಎಂಬಂತೆ ಪುನಃ ಪ್ರಶ್ನಿಸುತ್ತ ಹೇಳಿದರು.

“ಇದೇನಿದು ಮುಲ್ಲ…ಮುಂದೆ ಯಾವಾಗಲೋ ಸಿಗುವ ಆ ಕ್ಷಣಿಕ ಸುಖಕ್ಕೆ ಈ ರೀತಿ ಕಷ್ಟಪಡುವುದು ಸರಿಯೇ? ನೀನು ನಡೆಯುವಾಗಲೆಲ್ಲ ಹೀಗೆ ಕಷ್ಟಪಡುತ್ತಿದ್ದರೆ ನಿನ್ನ ಪ್ರಯಾಣವೆಲ್ಲ ಯಾತನಮಯವಾಗಿಯೇ ಇರುತ್ತದೆ. ಈ ರೀತಿ ನೀನು ನೋವು ಅನುಭವಿಸುತ್ತಲೇ ಇದ್ದರೆ, ನೋವಿನ ನಡುವೆ ನಿನ್ನ ಗುರಿ ಮರೆತು ಹೋಗಿ, ನೀನು ಸಿಗುತ್ತದೆ ಎಂದುಕೊಂಡಿರುವ ಸುಖವನ್ನು ಪಡೆಯದಿರಬಹುದು. ಅದರ ಬದಲು, ಹಿತವಾಗಿ ನಡೆಯುತ್ತಾ ಸುಖವಾಗಿ, ಆನಂದವಾಗಿ ಇರಬಾರದೇ?”

ಎಂದು ಒಬ್ಬರಾದ ಮೇಲೆ ಒಬ್ಬರು ಮುಲ್ಲನನ್ನು ಪ್ರಶ್ನೆ ಮಾಡುತ್ತಲೇ ಇದ್ದರು. ಮುಲ್ಲ ಸಹನೆಯಿಂದ ಎಲ್ಲರ ಮಾತನ್ನು ನಗುಮೊಗದಿಂದ ಆಲಿಸುತ್ತಲೇ ಇದ್ದ. ಜನರ ಪ್ರಶ್ನೆಗಳು ಮುಗಿಯುವ ಲಕ್ಷಣಗಳೇ ಇರಲಿಲ್ಲ…ಅವರ ವ್ಯಕ್ತಿತ್ವದ ಪ್ರತಿಫಲನದಂತೆ, ಅನಿಸಿದ್ದಕ್ಕೆಲ್ಲ ಅಕ್ಷರದ ರೂಪ ಕೊಟ್ಟು, ಮಾತಾನಾಡುತ್ತಲೇ ಇದ್ದರು. ಕೊನೆಗೆ ಮುಲ್ಲ, ಅವರೆಲ್ಲರ ಆಲೋಚನಾ ಧಾಟಿಯನ್ನು ತುಂಡರಿಸುವಂತೆ ಒಮ್ಮೆ ಜೋರಾಗಿ ಕೂಗಿ ಹೇಳಿದ…

“ಗುರಿ ತಲುಪಿ ಶೂ ಬಿಚ್ಚಿದಾಗ ಸುಖ ಸಿಗುತ್ತದೆ ಎಂದು ನಾನು ಈಗ ಕಷ್ಟ ಪಡುತ್ತಿರುವುದು ತಪ್ಪೇ ಇರಬಹುದು. ಆದರೆ ನೀವು ಜೀವನ ಪೂರ್ತಿ ಮಾಡುತ್ತಿರುವುದೇನು…?”

ಎಂದು ಹೇಳಿ, ಧರಿಸಿದ್ದ ಬಿಗಿ ಶೂಗಳನ್ನು ಬಿಚ್ಚಿ ಎಸೆದು..ಬಿರಬಿರನೆ ನಡೆದು ಮುಲ್ಲ ಹೊರಟುಹೋದ. ಮುಲ್ಲ ಹಾಗೆಯೇ… ಕೇಳದಿದ್ದರೆ ಪ್ರತಿಯೊಂದನ್ನು ವಿವರಿಸಿ ಹೇಳುವುದೇ ಇಲ್ಲ. ಮುಲ್ಲನನ್ನು ಹಿಂಬಾಲಿಸಿದ ಜನ, ಮರದ ಕೆಳಗೆ ಕುಳಿತು ಪಕ್ಕದ ಕೆರೆಯಲ್ಲಿ ಲಾಗ ಹಾಕುತ್ತಿದ್ದ ನೀರು ಕೋಳಿಗಳನ್ನು ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದ ಮುಲ್ಲನ ಸುತ್ತ ಸೇರಿದರು. ಪ್ರಪಂಚದ ಯಾವುದೋ ಅಧ್ಬುತ ನಡೆಯುತ್ತಿದೆಯೇನೋ ಎಂಬಂತೆ ಆ ಸುಂದರ ದೃಶ್ಯಕಾವ್ಯದಲ್ಲಿ ಮೈಮರೆತಿದ್ದ ಮುಲ್ಲ, ನೀರುಕೋಳಿಗಳು ಹಾರಿಹೋದ ಮೇಲೆ ಸುತ್ತಲಿನ ಜನರನ್ನು ಗಮನಿಸಿದ. ಮಾಸದ ಮುಗುಳ್ನಗುವಿನ ಮುಲ್ಲ, ತನ್ನದೇ ಮಾತುಗಳ ಅರ್ಥವನ್ನು ಜನರಿಗೆ ಅರ್ಥವಾಗುವ ಹಾಗೆ ವಿವರಿಸಿ ಹೇಳಲು ಆರಂಭಿಸಿದ.

ಪ್ರತಿ ಮನುಷ್ಯನ ಮನದಲ್ಲೂ ಒಂದಲ್ಲ ಒಂದು ಕನಸುಗಳಿರುತ್ತವೆ. ಒಂದು ಕನಸು ನನಸಾದ ಮೇಲೆ ಮತ್ತೊಂದು ಕನಸು…ಅದು ಈಡೇರಿದ ಮೇಲೆ ಮಗದೊಂದು ಕನಸು…ಹೀಗೆಯೇ ಮುಂದುವರಿಯುತ್ತ… ಯಾವಾಗಲೂ ಕನಸುಗಳಲ್ಲಿಯೇ ಬದುಕುತ್ತ ಅಥವಾ ಅವುಗಳನ್ನು ಈಡೇರಿಸುವ ಪ್ರಯತ್ನಗಳಲ್ಲೇ ಜೀವನದ ಬಹುಭಾಗವನ್ನು ಕಳೆದುಬಿಡುತ್ತೇವೆ. ಈ ಗೊಂದಲಗಳಲ್ಲಿ, ಹಳೆಯ ಕನಸು ನನಸಾದ ಸಂಭ್ರಮಗಳನ್ನು ಅನುಭವಿಸಲು ಸಾಧ್ಯವಾಗುವುದೇ ಇಲ್ಲ….ಏಕೆಂದರೆ ಹಿಡಿಯಲು ಮುಂದೆ ಮಗದೊಂದು ಕನಸು ಸಿದ್ದವಾಗಿರುತ್ತದೆ. ಹಳೆಯ ನೆನಪು ಅಥವಾ ಹೊಸ ಕನಸುಗಳ ಮಧ್ಯೆ ಕೈಯಲ್ಲಿರುವ ಕ್ಷಣಗಳನ್ನು ಆನಂದಿಸಲು ಮನ ಸಿದ್ದವಿರುವುದೇ ಇಲ್ಲ. ಅಸಲಿಗೆ ಖುಷಿಯಾಗಿರುವುದಕ್ಕೆ ಕನಸುಗಳ ಅಗತ್ಯವಿದೆಯೇ ಎಂಬುದೊಂದು ದೊಡ್ಡ ಪ್ರಶ್ನೆ. ಇತರರಿಗೆ ತೊಂದರೆಯಾಗದಂತೆ ನಮಗೆ ಖುಷಿಕೊಡುವ ಕೆಲಸಗಳನ್ನು ನಿರ್ವಂಚನೆಯಿಂದ ನಮಗೆ ಮಾಡಲು ಪ್ರತಿಕ್ಷಣವು ಸಾಧ್ಯವಾದರೆ, ಮನಸ್ಸು ಯಾವಾಗಲೂ ಭಾರವಾಗುವುದೇ ಇಲ್ಲ.

ಇಷ್ಟವಿರಲಿ…ಬಿಡಲಿ… ಚಿಕ್ಕಂದಿನಿಂದಲೂ ನಮಗೆ ಹೊಂದದ ಜೀವನವನ್ನು ರೂಢಿಸಿಕೊಂಡು, ಒಂದು ಹಂತ ತಲುಪಿದ ಮೇಲೆ ನೆಮ್ಮದಿಯಾಗಿರಬಹುದಲ್ಲ ಎಂಬ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಇದು ಹಿರಿಯರು ಕಲಿಸುವ ಪಾಠ ಮತ್ತು ಅವರ ಹಿರಿಯರು ಅವರಿಗೆ ಅದನ್ನೇ ಕಲಿಸಿರುತ್ತಾರೆ. ವಿದ್ಯಾರ್ಥಿಯಾಗಿರುವಾಗ ಒಳ್ಳೆಯ ಕೆಲಸ ಸಿಗಲಿ ಎಂದು ಪ್ರತಿ ಕ್ಷಣವೂ ಓದು ಓದು… ಓದಿದ ನಂತರ ಕೆಲಸ ಹಿಡಿಯುವ ಆಟ…ಕೆಲಸ ಸಿಕ್ಕ ನಂತರ ಬೇಗ ಬೇಗ ಮೇಲೆರಬೇಕೆನ್ನುವ ಬಯಕೆ…ಒಂದು ಹಂತ ತಲುಪಿದ ನಂತರ, ಮದುವೆಯಾಗಿ ಸುಖವಾಗಿರೋಣ ಎಂಬ ಹಪಾಹಪಿ…ಮದುವೆಯಾದ ನಂತರ, ಮನೆ, ಕಾರು…ಮಕ್ಕಳು…ಅವುಗಳೆಲ್ಲ ಮುಗಿದ ಮೇಲೆ…ಒಳ್ಳೆಯ ಮನೆ…ಒಳ್ಳೆಯ ಕಾರು..ಮತ್ತೊಂದು ಕಾರು…ಮತ್ತೊಂದು ಮನೆ…. ಎಷ್ಟೇ ನೋವಾಗುತ್ತಿದ್ದರೂ, ಜನ ಧರಿಸಿರುವ ಶೂ ಅನ್ನು ಬಿಚ್ಚುವುದೇ ಇಲ್ಲ. ಶೂ ಬಿಚ್ಚಿದ ಮೇಲೆ ಆಗುವ ಪುಳಕದ ಆಸೆಯಿಂದ, ಬಿಚ್ಚುವ ಆಸೆಯಲ್ಲಿಯೇ ಜೀವನವೆಲ್ಲ ಕಳೆದುಬಿಡುತ್ತೇವೆ. ಪ್ರತಿಯೊಬ್ಬರೂ ಅದನ್ನೇ ಮಾಡುತ್ತಿರುವುದರಿಂದ, ಈ ಎಲ್ಲ ಚಟುವಟಿಕೆಗಳು ಕೃತ್ರಿಮ ಎಂದು ಒಬ್ಬರಿಗೊಬ್ಬರಿಗೆ ಅನ್ನಿಸುವುದೇ ಇಲ್ಲ. ಬದಲಿಗೆ, ಈ ರೀತಿಯ ಜೀವನ ನಡೆಸದೆ ಇರುವವರು ವ್ಯವಸ್ಥೆಯಿಂದ ಹೊರಗಿರುವವರಂತೆ ಕಾಣುತ್ತಾರೆ.

ಕೋಗಿಲೆ ಕೂಗಿಗೆ ಖುಷಿ ಪಡುವವನು ಹುಚ್ಚನಂತೆ ಕಾಣುತ್ತಾನೆ. ಮಳೆಹನಿಗೆ ಪುಳಕಗೊಂದರೆ ಎಳಸು ಅನ್ನುತ್ತಾರೆ…ಮುಕ್ತವಾಗಿ ಮನದುಂಬಿ ನಕ್ಕರೆ ಏನೋ ವಿಶೇಷವೆಂಬಂತೆ ತಿರುತಿರುಗಿ ನೋಡುತ್ತಾರೆ. ಶೂ ಬಿಚ್ಚದೆ ಎಲ್ಲರೂ ಸ್ಪರ್ಧೆಯಲ್ಲಿದ್ದರೆ ಮಾತ್ರ ಒಬ್ಬರಿಗೊಬ್ಬರಿಗೆ ಖುಷಿ…ಮಧ್ಯೆ ಯಾರೋ ಒಬ್ಬ ಬಿಡುವು ತೆಗೆದುಕೊಂಡು ವಿಶ್ರಾಂತಿಯ ಸುಖವನ್ನು ಅನುಭವಿಸುತ್ತಿದ್ದರೆ…ಆತನನ್ನು ಪುನಃ ಸ್ಪರ್ಧೆಗೆ ಎಳೆಯಲು ಕನಸುಗಳ ಗೊಂಚಲು ಹಿಡಿದು ಅಕ್ಕಪಕ್ಕದವರು ಸಿದ್ದವಾಗಿಬಿಡುತ್ತಾರೆ. ಎಷ್ಟೋ ಜನರಿಗೆ, ಅವರೊಡನೆ ಅವರು ಬದುಕಲು ಸಾಧ್ಯವಾಗುವುದೇ ಇಲ್ಲ. ಏಕಾಂತದ ಮೌನದ ಜೊತೆಗಿನ ಖುಷಿ, ಅಂತರಂಗದ ಪಿಸುಮಾತಿನ ಸಪ್ಪಳ, ಮುಕ್ತ ಭಾವದಲ್ಲಿಯ ಆನಂದದ ಅನುಭೂತಿ.., ಪುಳಕ.., ಮನದ ತೇವ.., ನಿಶ್ಯಬ್ದದ ಸಂಗೀತ.., ಪ್ರಾಕೃತಿಕ ಜಗತ್ತಿನೊಳಗೊಂದಾಗುವ ಲೀನತೆ.., ನಮ್ಮೊಳಗೇ ನಾವಾಗುವ ತಲ್ಲೀನತೆ ಮುಂತಾದ ಹಲವಾರು ಸಂಗತಿಗಳು ಜನರಿಗೆ ದಕ್ಕುವುದೇ ಇಲ್ಲ. ಆದರೆ, ಬದುಕು ಹಾಗೆ ಆಗದಿರಲಿ…ಹಿಂದಿನದನ್ನು ಹಿಂದಕ್ಕೆ ಬಿಟ್ಟು, ಮುಂದಿನ ದಿನಗಳಿಗೆ ಹಿಂದಿನ ಅನುಭವಗಳನ್ನು ಹಿಡಿದು ಯಾವಾಗಲೂ ಸನ್ನದ್ದರಾಗಿರದೆ, ಈಗಿರುವ ಕ್ಷಣವನ್ನು ಆನಂದದಿಂದ ಅನುಭವಿಸೋಣ…ಜೀವನವನ್ನೆಲ್ಲ ತಿಂಗಳುಗಳಲ್ಲಿ, ವರ್ಷಗಳಲ್ಲಿ ಲೆಕ್ಕ ಹಾಕದೆ, ನಮಗೆ ದಕ್ಕಿರುವ ಕ್ಷಣಗಳಲ್ಲಿ ಹಿಡಿದಿಡುತ್ತಾ ಪ್ರತಿ ಕ್ಷಣವನ್ನು ಬದುಕಿಬಿಡೋಣ…ಎನ್ನುತ್ತಾ, ನಗುತ್ತಾ…ನಗಿಸುತ್ತಾ ಮುಲ್ಲ ಮೌನವಾದ.


ಆ ಪಾರ್ಟಿಯಲಿ…!

ಮಾರ್ಚ್ 10, 2011

ದೀಪ ಉರಿಯುವ ದಾರಿಯಲ್ಲಿ,
ಕಾತುರಗಳ ಜೊತೆಗೆ ಸಾಗಿ,
ಕೊಠಡಿಯೊಳಗೆ ಗುಂಪ ಸೇರಿ,
‘ಹಾಯ್’ ಎಂದೂ ಉಲಿಯುವಾಗ,
ಕಿವುಡುಗಚ್ಚುವ ಸದ್ದು ಏರಿ,
ಪಾರ್ಟಿ ಶುರುವಾಗಿಹೋಯಿತು…!

ಹಮ್ಮು ಬಿಮ್ಮುಗಳಿಗೆಲ್ಲ ಬೀಗ ಹಾಕಿ,
ಎಲ್ಲರಲಿ ಒಂದಾಗಿ, ಮೌನವೇ ಮಾತಾಗಿ,
ಮಿಂಚುವ ಬೆಳೆಕಿನಲಿ, ಇಂಚಿಂಚೆ ಸಡಿಲಾಗಿ,
ಮುಕ್ತತೆಯ ಆಗರದಿ, ಮಜುಗರವು ಅಳಿವಾಗ,
ಉಬ್ಬು ತಗ್ಗಿನೆಲ್ಲೆಲ್ಲಾ ಬೆವರಿನಾಟ…

ಅಲ್ಲವನು…ಇಲ್ಲವಳು…ನಡುವೆ ಹತ್ತಾರು..
ನಿಶೆ ಜಾರಿ, ನಶೆಯೇರಿ, ಕುಲುಕುಗಳು ಜೋರಾಗಿ,
ಅರಿವಿರದೆ ನಡೆಯುತ್ತಾ, ಮೈಮರೆತು ಜಿಗಿಯುತ್ತಾ,
ಆ ಸದ್ದ ಸುದ್ದಿಯಲಿ ಏನೇನೋ ಅರಸುತ್ತಾ,
ಹಾಕಿದ ಕೇಕೆಗಳೆಲ್ಲ ಕ್ಷೀಣವಾಗಿ ಹೋದವು!

ಬೆಡಗು ಬಿನ್ನಾಣಗಳು ಒಂದೊಂದೇ ಮರೆಯಾಗಿ,
ಕುಡಿಯುತ್ತಾ, ಮೆರೆಯುತ್ತಾ, ಮತ್ತಿನಲೇ ತೇಲುತ್ತಾ,
ಹಿಂಭಾರ ಮುಂಭಾರ ಕಣ್ತುಂಬ ನೋಡುತ್ತಾ,
ಕಾತುರದಿ, ಆತುರದಿ, ಆಸೆಗಳು ಹೆಚ್ಚಾಗಿ,
ಕುಣಿಕುಣಿಯುತ್ತಲೇ, ಕುಚ ಮರ್ಧನ!

ಬುರಬುರನೆ ನೋರೆಯುಕ್ಕಿ, ಸರಸರನೆ ಒಳಹೊಕ್ಕಿ,
ಕೈಹಿಡಿದು, ಕಟಿಬಳಸಿ, ಕುಡಿನೋಟ ಜತೆ ಬೆರಸಿ,
ಸುತ್ತಲೂ ತಡಕುತ್ತಾ, ಏನೇನೋ ಹುಡುಕುತ್ತಾ,
ತನುವ ತಿರುವುಗಳಲ್ಲೆಲ್ಲಾ ಬೆರಳಿನಾಟ!

ಮನ ಅರಳಿ, ತನು ಕೆರಳಿ, ಬಯಕೆಗಳು ಗರಿಗೆದರಿ,
ತಿಳಿಗಾಳಿ ಸಂಚಿನಲ್ಲಿ ಒಳಗೆಲ್ಲ ಸುಳಿದಾಡಿ,
ಮುಖಕೆ ಮುಖ ಹಚ್ಚಿ ಮುಲುಗುವಾಗ,
ತಂಗಾಳಿ ಸತ್ತಿತ್ತು… ಬೆಳಕು ಹರಿದಿತ್ತು!
ಪಾರ್ಟಿ ಮುಗಿದಿತ್ತು…!


ದೊಡ್ಡಸ್ತಿಕೆಯ ಗುಲಾಮಗಿರಿ!

ಮಾರ್ಚ್ 2, 2011

ಮುಲ್ಲ ಸಿಹಿ ಸವಿಯಾದ ಬೆಲ್ಲದ ತರಹ…ಬೆಲ್ಲಕ್ಕೆ ಇರುವೆ ಮುತ್ತುವಂತೆ ಮುಲ್ಲನ ಸುತ್ತಲೂ ಯಾವಾಗಲೂ ಜನ ಸೇರಿರುತ್ತಾರೆ. ಮುಲ್ಲ ಯೋಗಿಯೂ ಅಲ್ಲ, ಭೋಗಿಯೂ ಅಲ್ಲ. ಬೆಳೆದು ದೊಡ್ಡವನಾದರೂ ಮುಗುವಿನಂತ ಮನಸು ಹೊಂದಿ, ಯಾವುದೇ ಸಂದರ್ಭದಲ್ಲೂ ಪೂರ್ವಗ್ರಹ ಪೀಡಿತವಾಗದೆ, ಮುಕ್ತವಾದ ಆಲೋಚನೆ ಮತ್ತು ನಗುವನ್ನು ತನ್ನ ವ್ಯಕ್ತಿತ್ವವನ್ನಾಗಿ ಮಾಡಿಕೊಂಡ ಒಬ್ಬ ಸಾಧಾರಣ ಮನುಷ್ಯ! ಕೇಳಿದವರಿಗೆ ಕೈಲಾದ ಸಹಾಯ ಮಾಡುತ್ತಾ, ಅವಶ್ಯಕತೆ ಇದ್ದವರಿಗೆ ಸರಳ ಸಲಹೆ ಸೂಚನೆ ನೀಡುತ್ತಾ, ನಗುತ್ತಾ… ನರ್ತಿಸುತ್ತಾ ಖುಷಿಯಾಗಿರುವುದೇ ಜೀವನದ ಮಹತ್ತರ ಗುರಿ ಎನ್ನುವಂತೆ ಪ್ರತಿ ಕ್ಷಣವೂ ಬದುಕುತ್ತಿದ್ದಾನೆ.

ಅದೊಂದು ಸುಂದರ ಸಾಯಂಕಾಲ…ಹಕ್ಕಿಗಳ ಚಿಲಿಪಿಲಿ ಕೇಳುತ್ತಾ, ಪಕ್ಕದಲ್ಲಿ ಹರಿಯುತ್ತಿದ್ದ ನದಿಯಲ್ಲಿನ ಜುಳುಜುಳು ನಾದವನ್ನು ಆಲಿಸುತ್ತಾ, ಹಾಯ್ ಎನಿಸುವಂತೆ ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿ, ಮುಲ್ಲ ವಿಶ್ರಮಿಸುತ್ತಿದ್ದ. ಯಾವುದೇ ಸಂದರ್ಭದಲ್ಲೂ ಮುಲ್ಲನ ಮುಗುಳ್ನಗೆ ಮಾಸುವುದೇ ಇಲ್ಲ..ದಿವ್ಯ ಮೂರ್ತಿಯಂತೆ ಕಂಗೊಳಿಸುತ್ತಿದ್ದ ಮುಲ್ಲನನ್ನು ಸುಮ್ಮನೆ ನೋಡುತ್ತಾ ಆತನ ಸುತ್ತಲೂ ಜನರು ಕುಳಿತಿದ್ದರು. ನಿಶ್ಯಬ್ದದ ಆ ಗಾನ, ಮಾತುಗಳೆಲ್ಲ ವ್ಯರ್ಥ ಎಂದು ಎಲ್ಲರನ್ನು ಮೌನವಾಗಿರುವಂತೆ ಮಾಡಿತ್ತು. ಹೊತ್ತು ಮುಳುಗುತ್ತಿದ್ದಂತೆ ಎಚ್ಚರವಾದ ಮುಲ್ಲ ಮನಸ್ಸಿಗೆ ಬಂದ ಕಥೆಯನ್ನು ಹೇಳಲಾರಂಭಿಸಿದ.

ಬಯಲು ಸೀಮೆಯ ಒಂದು ಹಳ್ಳಿಯಲ್ಲಿ ಜಮೀನ್ದಾರನೊಬ್ಬನಿದ್ದ. ಸುತ್ತಲಿನ ಎಲ್ಲಾ ಹಳ್ಳಿಯಲ್ಲಿ ಯಾರು ಹೊಂದಿರದಷ್ಟು ಜಮೀನು ಹೊಂದಿ ಅಗಾಧ ಸಂಪತ್ತಿಗೆ ಒಡೆಯನಾಗಿ, ಹಲವಾರು ಆಳು ಕಾಳುಗಳ ಮಾಲಿಕನಾಗಿ ರಾಜನಿಗೆ ಕಡಿಮೆಯಿಲ್ಲವೆನ್ನುವಂತೆ ಮೆರೆಯುತ್ತಿದ್ದ. ಅವಶ್ಯಕತೆ ಇರುವವರಿಗೆ ಸಹಾಯ ಮಾಡುತ್ತಾ ಹಳ್ಳಿಯವರಿಗೆಲ್ಲ ಉದ್ಯೋಗ ನೀಡಿದ್ದ ಜಮೀನ್ದಾರ ಎಲ್ಲರಿಗೂ ಮೆಚ್ಚುಗೆಯವನಾಗಿದ್ದ…ಎಲ್ಲರೂ ಅವನನ್ನು ಬಹಳ ಗೌರವಿಸುತ್ತಿದ್ದರು. ಹುಟ್ಟಿನಿಂದಲೂ ಪಡೆಯುತ್ತಿದ್ದ ನಮಸ್ಕಾರಗಳು, ಪುರಸ್ಕಾರಗಳು, ವಿಶೇಷ ಸವಲತ್ತುಗಳು, ಗೌರವಗಳು ಎಲ್ಲವೂ ಜೊತೆಗೂಡಿ, ಅವನ ವ್ಯಕ್ತಿತ್ವದಲ್ಲೇ ಮಿಳಿತವಾಗಿಹೋಗಿ, ನಾನು ಎಲ್ಲರಿಗಿಂತಲೂ ಮೇಲಿನವನು ಎಂಬ ಭಾವವನ್ನು ಅವನ ಮನಸ್ಸಿನಲ್ಲಿ ಮೂಡಿಸಿಬಿಟ್ಟಿದ್ದವು. ಎಲ್ಲಿ ಹೋದರೂ ತನ್ನ ದೊಡ್ಡಸ್ತಿಕೆಯನ್ನು ಪ್ರದರ್ಶಿಸುತ್ತಾ ಅದಕ್ಕೆ ಸೂಕ್ತ ಮತ್ತು ಮನಮೆಚ್ಚುವ ಪ್ರತಿಕ್ರಿಯೆಯನ್ನು ಬಯಸುವುದು ಅವನಿಗೆ ಅಭ್ಯಾಸವಾಗಿಹೋಗಿತ್ತು. ಸಮಯದ ಬಂಡಿ ಸಾಗುತ್ತಲೇ ಇತ್ತು…ಪ್ರತಿವರ್ಷವೂ ನಡೆಯುತ್ತಿದ್ದ ಹಳ್ಳಿಯ ಹಬ್ಬ ಈ ವರ್ಷವೂ ಬಂದಾಗ, ಹಲವು ಗುಂಪುಗಾರಿಕೆಗಳಿಂದ ಕೆಲವು ಗೊಂದಲಗಳಾಗಿ, ಹಬ್ಬವು ನಿಂತುಹೋಯಿತು. ಕೆಲವು ಬುದ್ದಿಹಿಡುಕರ ಮಸಲತ್ತಿನಿಂದ, ಗೊಂದಲಗಳಿಗೆಲ್ಲ ಕಾರಣ ಆ ಜಮೀನ್ದಾರನೆ ಎಂಬ ಆರೋಪ ಗುಸುಗುಸುವಿನೊಡನೆ ಶುರುವಾಯಿತು. ಆರೋಪ ನಿಜವಲ್ಲದಿದ್ದರೂ, ಸುಳ್ಳು ಎನ್ನುವುದಕ್ಕೂ ಪುರಾವೆಗಳು ಸಿಗದೇ ಎಲ್ಲರ ಆಲೋಚನೆಗಳು ತಮ್ಮಷ್ಟಕ್ಕೆ ತಾವೇ ಗೊಣಗಾಡಲು ಆರಂಭಿಸಿದವು. ಅಂದಿನಿಂದ, ಹಳ್ಳಿಯವರು ಜಮೀನ್ದಾರನಿಗೆ ತೋರುತ್ತಿದ್ದ ಗೌರವಗಳು, ನೀಡುತ್ತಿದ್ದ ಉಪಚಾರಗಳು ಕಡಿಮೆಯಾದವು. ಹುಟ್ಟಿನಿಂದಲೂ ಪಡೆಯುತ್ತಿದ್ದ ವಿಶೇಷ ಪರಿಗಣನೆಗಳಿಗೆ ಸಂಪೂರ್ಣ ಒಗ್ಗಿ ಹೋಗಿದ್ದ ಜಮೀನ್ದಾರ, ಅವುಗಳು ದೊರಕದೆ ಪ್ರತಿದಿನ ಕೊರಗಲಾರಂಭಿಸಿದ. ಅವನ ಜೀವನದಲ್ಲಿ ಏನೂ ಕಡಿಮೆಯಾಗದಿದ್ದರೂ, ನಿಧಾನವಾಗಿ ಕೊರಗಿ, ಕರಗಿ, ಕುಗ್ಗಿ ಹೋಗಿ ಒಂದು ದಿನ ಸತ್ತು ಹೋದ.

ಮುಲ್ಲನ ಕಥೆಗಳೇ ಹಾಗೆ.. ವಿವರಿಸಿ ಹೇಳದಿದ್ದರೆ ತಲೆ ಬಾಲ ಒಂದೂ ಅರ್ಥವಾಗುವುದಿಲ್ಲ. ಹಂಚಿಕೊಳ್ಳಲಾಗದ ಪ್ರೀತಿ ಮತ್ತು ಗೆಳೆತನ, ಉಪಯೋಗಿಸಲಾಗದ ಬುದ್ದಿವಂತಿಕೆ ಎಷ್ಟಿದ್ದರೇನು ಪ್ರಯೋಜನ? ಆದರೆ ಮುಲ್ಲ, ಆಸಕ್ತಿಯಿರುವ ಜನರಿಗೆ ತನ್ನಲ್ಲಿರುವುದನ್ನು ಹಂಚಲು, ಅದನ್ನು ಪಡೆಯುವ ದಾರಿ ತೋರಿಸಲು ಎಂದೂ ಬೇಸರ ಮಾಡಿಕೊಳ್ಳುವುದಿಲ್ಲ. ಒಣ ಆಡಂಬರಗಳ, ಉಪಚಾರಗಳ ಬಂಧಿಖಾನೆಯೊಳಗೆ ನಿತ್ಯವೂ ಕೊರಗುತ್ತಿರುವ ಹಲವಾರು ಜನರ ಮನದ ಅಭಿವ್ಯಕ್ತಿಯಂತೆ ಇರುವ ಕಥೆಯ ಅರ್ಥವನ್ನು ವಿವರಿಸಿ ಹೇಳಲು ಆರಂಭಿಸಿದ.

ಪ್ರತಿನಿತ್ಯವೂ ಮನುಷ್ಯ ಭ್ರಮೆಗಳಲ್ಲಿಯೇ ಬದುಕುತ್ತಾ, ಆ ಬದುಕೇ ನಿಜವೆಂದು ನಂಬುತ್ತಾ, ಜತೆಗಿರುವವರನ್ನು ನಂಬಿಸಲು ಪ್ರಯತ್ನಿಸುತ್ತಾ, ಅದನ್ನೇ ಒಂದು ಜೀವನ ವಿಧಾನ ಮಾಡಿಕೊಂಡು ಬಿಡುತ್ತಾನೆ. ವ್ಯಕ್ತಿತ್ವದ ಬದಲಾಗಿ, ದ್ಯೋತಕಗಳಲ್ಲೇ ತನ್ನ ಗುರುತಿಸುವಿಕೆಯನ್ನು ಪ್ರತಿಷ್ಠಾಪಿಸಲು ಯತ್ನಿಸಿ, ಆ ಯತ್ನಗಳಲ್ಲೇ ಜೀವನ ಮುಗಿಸಿಬಿಡುತ್ತಾನೆ…ಒಂದು ವೇಳೆ ಆ ವ್ಯಕ್ತಿ ಯಶಸ್ವೀ ಮತ್ತು ಪ್ರಭಾವಶಾಲಿಯಾಗಿದ್ದಾರೆ, ಸುತ್ತಲಿನ ಸಮಾಜವು ಆತನನ್ನೇ ಅನುಕರಿಸಲು ಆರಂಭಿಸುತ್ತದೆ. ನಂತರ ಅದೊಂದು ಜೀವನಕ್ರಮವಾಗಿ ಮುಂದುವರಿದು ಪರಂಪರೆಯಾಗಿ ಉಳಿದುಬಿಡುತ್ತದೆ.

ಮನುಷ್ಯ, ಪಡೆದ ಪದವಿಯಲ್ಲಿ, ಗಳಿಸಿದ ಹಣದಲ್ಲಿ, ಹೊಂದಿದ ಅಧಿಕಾರಗಳಲ್ಲಿ, ಸಂಗ್ರಹಿಸಿದ ಸಂಪತ್ತಿನಲ್ಲಿ, ಕಾರು, ಬಂಗಲೆ ಮುಂತಾದ ಐಶಾರಾಮಿ ವಸ್ತುಗಳ ಉಪಭೋಗಗಳಲ್ಲಿ ಮತ್ತು ಪಡೆಯುವ ಮರ್ಯಾದೆಗಳಲ್ಲೇ ತನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತಾ ಅವುಗಳಿಗೆ ಗುಲಾಮನಾಗಿಬಿಡುತ್ತಾನೆ. ಅವನು ಯಾವುದಕ್ಕೆ ಜಾಸ್ತಿ ಗುಲಾಮನಾಗಿರುವನೋ, ಅದು ದೊರೆಯದಿದ್ದರೆ ಜೀವನವೇ ವ್ಯರ್ಥ ಎಂಬ ಮನೋಭಾವ ಮೂಡಿ, ದುಗುಡದ ಭಾರವನ್ನು ಹೇರಿಕೊಳ್ಳುತ್ತಾನೆ. ಲಾಲಸೆಗಳಿಗೆ ದಾಸನಾಗುವುದಕ್ಕೂ ಮತ್ತು ಮಾದಕ ವ್ಯಸನಿಯಾಗುವುದಕ್ಕು ಅಷ್ಟೊಂದು ವ್ಯತ್ಯಾಸವೇನು ಇಲ್ಲ. ಆದರೆ ಸಮಾಜದ ಬಹುಸಂಖ್ಯೆಯ ಜನ, ಬದುಕುವ ರೀತಿ ತಪ್ಪಿದ್ದರೂ, ಲಾಲಸೆಗಳಲ್ಲೇ ಜೀವನ ಹುಡುಕುತ್ತಿದ್ದರೂ, ಅದು ಸಮೂಹದ ಜೀವನಕ್ರಮವಾದ ಕಾರಣ, ಬಹಳಷ್ಟು ಜನ ಯೋಚಿಸದೆ ಪ್ರಶ್ನಿಸದೆ ಬದುಕಿಬಿಡುತ್ತಾರೆ. ಯಾರೋ, ಎಲ್ಲೋ ಒಬ್ಬ ಈ ರೂಢಿಗಳ ವಿರುದ್ದ ದನಿಯೆತ್ತಿದರೂ, ಅದು ಬಹು ಸಂಖ್ಯಾತ ಅಭಿಪ್ರಾಯವಾಗಿ ವ್ಯಕ್ತವಾಗುವವರೆಗೆ, ಅದು ವ್ಯವಸ್ಥೆಯನ್ನು ವಿರೋಧಿಸುವ ಹುಚ್ಚುತನದಂತೆ ತೋರುತ್ತದೆ.

ಯಾವುದೇ ವ್ಯಕ್ತಿ ಸುಂದರ ಮತ್ತು ಸರಳವಾಗಿ ಚಿಂತಿಸಿ, ನಿಜ ವ್ಯಕ್ತಿತ್ವದೊಡನೆ ಬದುಕಬಲ್ಲವನಾದರೆ, ಅವನು ಜನ ಮರ್ಯಾದೆ ಕೊಡದಿದ್ದರೂ ಖುಷಿಯಾಗಿರಬಲ್ಲ. ಅಧಿಕಾರ ಹೋದರೂ, ಸಂಪತ್ತು ಕೈಜಾರಿದರೂ, ತನ್ನ ಗಟ್ಟಿತನವನ್ನು ದೃಢವಾಗಿಟ್ಟುಕೊಂಡು ಸಂತಸದಿಂದ ಜೀವನ ಸಾಗಿಸಬಲ್ಲ. ಜನರ ಮಧ್ಯೆ ಗುರುತಿಸಿಕೊಳ್ಳಬೇಕೆಂಬ ಆಸೆಗಾಗಿ ಅಥವಾ ಹುಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಅಥವಾ ಕೆಲವು ಕಾರಣಗಳಿಂದ ಮಾತ್ರ ಖುಶಿಯಾಗಿರಬಹುದು ಎಂಬ ಭ್ರಮೆಗಳೊಡನೆ ದೊಡ್ಡಸ್ತಿಕೆಯ ಗುಲಾಮಗಿರಿಗೆ ಒಗ್ಗಿಹೊದರೆ, ಆತ್ಮಸಾಕ್ಷಿಗೆ, ನಿಜಖುಷಿಗೆ ಮಂಕು ಕವಿಯುತ್ತದೆ ಮತ್ತು ಗುಲಾಮಗಿರಿ ಹೆಚ್ಚುತ್ತಾ ಹೋಗುತ್ತದೆ. ನಮಗೆ, ನಾವು ಪಡೆಯುತ್ತಿರುವಷ್ಟು ತಿಳುವಳಿಕೆ ಬೇಕಾಗಿಲ್ಲ, ಸ್ವಾಭಾವಿಕವಾಗಿ ಬದುಕಲು ಮಿತಿಮೀರುವಂತೆ ಸಂಪತ್ತು ಸಂಗ್ರಹಿಸುವ ಅಗತ್ಯವಿಲ್ಲ. ಗುಲಾಮಗಿರಿಯೇ ಸ್ವಾಭಾವಿಕ ಜೀವನ ಎನ್ನುವಂತೆ ಪ್ರತಿಬಿಂಬಿಸುವ ಮನಸ್ಥಿತಿಯ ಅವಶ್ಯಕತೆಯಿಲ್ಲ. ಅದರ ಬದಲು ಬಾಹ್ಯದ ಬೆಳವಣಿಗೆಗಿಂತ ಆಂತರಿಕ ಪ್ರಬುದ್ದತೆಗೆ ಹೆಚ್ಚು ಒತ್ತುಕೊಡೋಣ. ಕಾರು ತೆಗೆದುಕೊಳ್ಳುವ ಶಕ್ತಿ ಬಂದಾಗ, ಕೇವಲ ಸ್ಕೂಟರ್ ಹೊದಿರುವವರು ಅಂತಸ್ತಿಗೆ ಕಡಿಮೆ ಎಂಬ ಕ್ಷುಲ್ಲಕ ಮನಸ್ಸು ಬೇಡ. ಪ್ರತಿದಿನವೂ ಯಾವುದಕ್ಕೂ ಗುಲಾಮರಾಗದೆ ಮಗುವಿನಂತೆ ಬದುಕಿಬಿಡೋಣ ಎನ್ನುತ್ತಾ, ಸುಮ್ಮನೆ ನಗುತ್ತಾ ಮುಲ್ಲ ಮೌನವಾದ.

.


ಬಿಟ್ಟುಬಿಡಿ ನನ್ನ ಪಾಡಿಗೆ…!

ಫೆಬ್ರವರಿ 8, 2011

ಹಿರಿಯಜ್ಜ, ಮುತ್ತಜ್ಜ, ನನ್ನಜ್ಜ…
ಉಜ್ಜುಜ್ಜಿ ಸವೆಸಿದ ಹಾದಿಯ ಮೇಲೆ,
ಒರಟು ಪಾದವ ಊರಿ ನಡೆವ ಬಯಕೆಗಳಿಲ್ಲ!
ಹಿಡಿದಿರುವುದ ಕೊಡವಿ ಬಿಡದೇ,
ಹಿಸುಕಿ ಹೊಸಕುವ ಜೀವಗಳೇ,
ಹೇಗೋ ಬದುಕಿ ಬಿಡುತ್ತೇನೆ…
ಬಿಟ್ಟುಬಿಡಿ ನನ್ನ ಪಾಡಿಗೆ…!

ಒಣಗುವವರೆಗೂ ಹರಿಯುತ್ತೇನೆ…
ದಣಿಯುವವರೆಗೂ ದುಡಿಯುತ್ತೇನೆ…
ಬಾಳುತ್ತೇನೆ…. ಬದುಕುತ್ತೇನೆ…
ಖುಷಿಗಳ ಜೊತೆ ಜೀಕುತ್ತೇನೆ…
ಬೀಳುತ್ತೇನೆ… ಏಳುತ್ತೇನೆ…
ಏನೋ ಕಲಿತೆ ಎಂದೂ ಬೀಗುತ್ತೇನೆ…
ಈಸುತ್ತೇನೆ… ಜಯಿಸುತ್ತೇನೆ…
ಆಚೆ ದಡವನ್ನ ಸೇರುತ್ತೇನೆ…
ಬಿಟ್ಟುಬಿಡಿ ನನ್ನ ಪಾಡಿಗೆ!

ಏರಿದ್ದು ಇಳಿಯಬಹುದು…
ಮರೆತದ್ದು ತಿಳಿಯಬಹುದು…
ಅರಿವಿರದೆ ಮಾಡಿದ್ದು, ತಿಳಿತಿಳಿದು ಉರುಳಿದ್ದು,
ಕನಸೆಲ್ಲಾ ಅರಿವಾಗಿ, ಮೈ ಮನಸು ಒಂದಾಗಿ,
ಭಯವಿರದ ಬದುಕಿನಲಿ, ಬಿತ್ತಿದ್ದೇ ಬೆಳೆಯುವುದು…
ಇಚ್ಚೆಯೂ ಕೆಚ್ಚಾಗಿ, ನನ್ನಲ್ಲಿ ನಾನಾಗಿ,
ಉಳಿಯುತ್ತೇನೆ… ಬೆಳೆಯುತ್ತೇನೆ…
ಬಿಟ್ಟುಬಿಡಿ ನನ್ನ ಪಾಡಿಗೆ!

ನಿಮ್ಮ ಗುರಿಗಳು ನಿಮಗೇ ಇರಲಿ,
ನನ್ನ ಸೇರಿಸಿ ಹೊಸೆಯಬೇಡಿ…
ನಿಮ್ಮ ಅರಿವ ಹೇರಬೇಡಿ…
ನನ್ನ ಮನವ ಕಾಡಬೇಡಿ…
ಜರಿಯಬೇಡಿ… ಕೊರೆಯಬೇಡಿ…
ಬಿಟ್ಟುಬಿಡಿ…ಬದುಕುತ್ತೇನೆ!

ಒಣ ಸಿದ್ದಾಂತಗಳು… ವೇದಾಂತಗಳು,
ಮಿಡಿಯುತಲೇ ಇರುವ ಕ್ರಿಯೆ ಕರ್ಮಾದಿಗಳು,
ಅದುರಿದರೂ, ಒದರಿದರೂ, ಕಳಚುವುದೇ ಇಲ್ಲ!
ಬೆನ್ನಿಗಂಟಿದ ಭೂತದ ಹಾಗೆ…
ನಿಮ್ಮನ್ನೇನು ನಾನು ಪ್ರಶ್ನಿಸುವುದಿಲ್ಲ…
ಹಾಗೇಕೆ, ಹೀಗೇಕೆ….ಇಲ್ಲೇಕೆ, ಅಲ್ಲೇಕೆ,
ಎಂದೆನುತ ಕಾಡಿಸಿ ಪೀಡಿಸುವುದಿಲ್ಲ…
ನಿಮ್ಮ ಪಾಡಿಗೆ ನೀವಿರಿ… ಬೇಕಿದ್ದರೆ ಬಳಿ ಬನ್ನಿ!
ಬಿಟ್ಟುಬಿಡಿ ನನ್ನ ಪಾಡಿಗೆ… ಪ್ಲೀಸ್!


ಮುಳಗದಿರಲಿ…ಹಡಗು!

ಡಿಸೆಂಬರ್ 24, 2010

ಮುಲ್ಲನಿಗೆ ವಯಸ್ಸಾಗುವುದೇ ಇಲ್ಲವೇನೋ…ಯಾವಾಗಲೂ ಹಸುಗಂದನ ತರಹ ನಗುತ್ತಾ, ನಗಿಸುತ್ತಾ, ನಲಿಯುತ್ತಲೇ ಇರುತ್ತಾನೆ. ಜನರು ತಮ್ಮಲ್ಲಿರುವುದನ್ನು ಅಭಿವೃದ್ದಿ ಪಡಿಸಿಕೊಳ್ಳುವುದರ ಬದಲು, ಅದನ್ನೇ ಹೊರಗಡೆ ಆಶಿಸಿ, ಉತ್ಪ್ರೇಕ್ಷಿತ ರೀತಿಯಲ್ಲಿ ನೋಡಿ ಆನಂದಿಸುವುದರಲ್ಲೇ ಹೆಚ್ಚು ತೃಪ್ತಿ ಪಡೆಯುತ್ತಾರೆ. ಮುಲ್ಲನನ್ನು ಜನರು ಪರಿಗಣಿಸುವ ರೀತಿಯಲ್ಲೂ ಹಾಗೆಯೇ ಆಗುತ್ತಿತ್ತು. ಸರಳ ಸುಂದರ ಮತ್ತು ಮುಕ್ತವಾಗಿ ಬದುಕುತ್ತಾ, ನಿಮ್ಮೊಳಗಿನ ಮಗುವಿನೊಡನೆ ಖುಷಿಯಾಗಿರಿ ಎಂದು ಮುಲ್ಲ ಹೇಳಿದರೆ, ಆನಂದಿಂದ ಇರುವುದಕ್ಕೆ ಯಾವಾಗಲೂ ಹೊರಗಡೆಯೇ ಕಾರಣ ಹುಡುಕುವ ಜನರು, ಯಾವುದೋ ಅಧ್ಬುತವೆಂಬಂತೆ ಸದಾ ಸಂತಸವಾಗಿರುವ ಮುಲ್ಲನನ್ನು ನೋಡಲು ತಂಡೋಪತಂಡವಾಗಿ ಅವನಿದ್ದಲ್ಲಿಗೆ ಬರುತ್ತಿದ್ದರು. ಹೀಗೆ ಬಂದ ಜನಗಳಿಗೆ ತನ್ನದೇ ಆದ ರೀತಿಯಲ್ಲಿ ಸಲಹೆ ಸೂಚನೆಗಳ ಜೊತೆ ಬುದ್ದಿ ಮಾತು ಹೇಳುತ್ತಾ, ತಿಳುವಳಿಕೆ ಮೂಡಿಸಲು ಮುಲ್ಲ ಪ್ರಯತ್ನಿಸುತ್ತಿದ್ದನು.

ಮಳೆಗಾಲ ಮುಗಿಯುತ್ತಾ ಬಂದಿತ್ತು…ಎಲ್ಲೆಲ್ಲೂ ನೆರೆ ಹಾವಳಿ, ರೋಗರುಜಿನಗಳು, ಹಗರಣಗಳು, ನಂಬಲಾಗದಂತಹ ಅನಾಚಾರಗಳು, ಛಿದ್ರವಾದ ನಂಬಿಕೆಗಳು, ಭರವಸೆಗಳು ಕಾಣೆಯಾಗಿ ಮುಕ್ತವಾಗಿ ಬದುಕಲು ಸಾಧ್ಯವಾದಿರುವ ಸಮಯದಲ್ಲಿ, ಚೂರು ಘಾಸಿಯಾಗದಂತೆ ಬದುಕುತ್ತಿರುವ ಮುಲ್ಲನ ಬಳಿಗೆ ಕೆಲವು ಜನ ಬಂದು ಸುಮ್ಮನೆ ಕುಳಿತುಕೊಂಡರು. ಮುಲ್ಲ ಯಾವಾಗಲೂ ಪ್ರತಿಯೊಬ್ಬರಿಗೂ ನಲ್ಲನೆ! ಬುದ್ದಿ ಮಾತು ಹೇಳುತ್ತಾ ಸಮಯ ಸರಿಸುವುದರ ಬದಲು, ಹಿತವಾಗಿ ನಗುತ್ತಾ ಮನಸ್ಸಿಗೆ ಬಂದ ಕಥೆಯನ್ನು ಹೇಳಲು ಪ್ರಾರಂಭಿಸಿದನು.

ವಿಶಾಲವಾದ ಮಹಾ ಸಾಗರದಲ್ಲಿ ಒಂದು ದೊಡ್ಡ ಹಡಗು ಚಲಿಸುತ್ತಿತ್ತು. ಹಲವಾರು ವಿಭಾಗಗಳು, ಸವಲತ್ತುಗಳು, ಸಾಮಗ್ರಿಗಳು ಮತ್ತು ಜನಗಳನ್ನು ಒತ್ತೊಯ್ಯುತ್ತಿದ್ದ ಅದು ಊಹಿಸಿಕೊಳ್ಳಲಾಗದಷ್ಟು ಅಗಾಧವಾಗಿತ್ತು ಮತ್ತು ಮನೋಹರವಾಗಿತ್ತು. ಅದೊಂದು ಸುದೀರ್ಘ ಪ್ರಯಾಣ…ಹಲವಾರು ಜಾತಿ, ಧರ್ಮ, ಪಂಗಡ, ಕುಲ, ಶ್ರೀಮಂತ, ಬಡವ ಇತರೆ ಎಲ್ಲಾ ರೀತಿಯ ಜನಗಳಿಂದ ಸಮೃದ್ದವಾಗಿದ್ದ ಅದು ಅತ್ಯಂತ ಸುಸಜ್ಜಿತವಾಗಿ, ಅನುಕೂಲಕರವಾಗಿ ಗಟ್ಟಿಮುಟ್ಟಾಗಿತ್ತು. ಯಾವುದೇ ಅಲೆಗೂ ಜಗ್ಗದೆ, ಎಂತಹುದೇ ಗಾಳಿಗೂ ಬಗ್ಗದೆ ನಿರಂತರವಾಗಿ ತೇಲುತ್ತಾ ಕಾಲದ ಜೊತೆ ಚಲಿಸುತ್ತಿದ್ದ ಹಡಗಿಗೆ ಒಂದು ವಿಶಿಷ್ಟ ಪ್ರಭಾವಳಿ ದಕ್ಕಿತ್ತು. ಆದರೆ, ಅದರಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಇದ್ಯಾವುದರ ಅರಿವೇ ಇರಲಿಲ್ಲ. ಅವರು ಕೆಲವೊಮ್ಮೆ ಕಾರಣವಿಲ್ಲದೆ, ಮಗದೊಮ್ಮೆ ಕ್ಷುಲ್ಲಕ ಕಾರಣಗಳಿಗೋಸ್ಕರ ತಮ್ಮ ತಮ್ಮಲ್ಲೇ ಬಡಿದಾಡುತ್ತಿದ್ದರು…ಹಾಗೆಯೇ, ಆ ಅಭ್ಯಾಸಗಳು, ಅನಾದಿ ಕಾಲದಿಂದ ಬಂದಿದ್ದು ಮತ್ತು ಅದನ್ನು ಬಿಟ್ಟುಬಿಟ್ಟರೆ ಅಪಚಾರ ಎಸಗಿದಂತೆ ಎಂದು ನಂಬಿದ್ದರು. ಈ ಜನಗಳ ಜೊತೆಗೆ, ಈ ನಂಬಿಕೆಗಳಿಗೆ ಅತೀತವಾಗಿ, ಮುಕ್ತವಾಗಿ ಸುಂದರವಾಗಿ ಬದುಕುತ್ತಿದ್ದ ಜನರು ಕೂಡ ಸಾಕಷ್ಟಿತ್ತಿದ್ದರು. ಹಡಗಿನಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ವಿಭಾಗ ಹಾಗು ಕೋಣೆಗಳಿದ್ದವು…ರಾತ್ರಿಯಾಗುತ್ತಿದ್ದಂತೆ ತಮ್ಮ ತಮ್ಮ ಕೋಣೆಗೆ ಹೋಗಬೇಕೆಂಬ ನಿಯಮವಿತ್ತು ಜತೆಗೆ ಸಂಪೂರ್ಣ ಸ್ವಾತಂತ್ರ್ಯವೂ ಇತ್ತು.

ಪ್ರತಿಕ್ಷಣವು ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಿದ್ದ, ಎದುರಿನವನು ಇಲ್ಲದಿದ್ದರಷ್ಟೇ ನಾವು ಸುಖವಾಗಿ ಬಾಳುವುದಕ್ಕೆ ಸಾಧ್ಯವಾಗುವುದು ಎಂದು ನಂಬಿದ್ದ ಆ ಎಲ್ಲಾ ಜನರಿಗೆ, ಅವರಿರುವುದು ಎಲ್ಲಿ ಎಂಬುದೇ ಮರೆತುಹೋಗಿತ್ತು. ಈ ನಡೆವಳಿಕೆಗಳು ಹೀಗೆಯೇ ಮುಂದುವರೆಯುತ್ತಾ, ಸಹಜವಾಗಿ ಬದುಕುವುದಕ್ಕೆ ಆಗದೆ, ಪ್ರತಿಯೊಬ್ಬರಿಗೂ ಜೀವನ ಅಸಹನೀಯವಾಗಿತ್ತು. ದಿನಕಳೆದಂತೆ, ಒಬ್ಬನು ತನ್ನ ಗುಂಪಿನ ತೀರ್ಮಾನದ ಪ್ರಕಾರ, ಎದುರಾಳಿಯ ಕೋಣೆಗೆ ಅವನಿಲ್ಲದಿರುವಾಗ ಹೋಗಿ, ನೀರು ತುಂಬಿ ಅವನು ಮುಳುಗಿಹೋಗಲಿ ಎಂದು ಕೋಣೆಯ ನೆಲದಲ್ಲಿ ರಂಧ್ರ ಕೊರೆಯಲು ಆರಂಭಿಸಿದನು. ಎದುರಾಳಿ ಗುಂಪಿಗೆ ಈ ವಿಷಯ ಅರಿವಾಗಿ, ಇವರೂ ಕೂಡ ತಾವೇನು ಕಡಿಮೆಯಿಲ್ಲ ಎನ್ನುವಂತೆ ಎದುರಾಳಿ ಗುಂಪಿನ ಕೋಣೆಯೊಳಗೆ ರಂಧ್ರ ಕೊರೆಯಲು ಆರಂಭಿಸಿದರು. ಹಡಗಿನ ಬಹುತೇಕ ಜನರು, ತಮ್ಮ ತಮ್ಮ ಎದುರಾಳಿಗಳಿಗೆ ಅರಿವಾಗದಂತೆ ಅವರ ಕೋಣೆಗಳಲ್ಲಿ ರಂಧ್ರ ಕೊರೆಯುವ ಕೆಲಸವನ್ನು ಸತತವಾಗಿ ಮುಂದುವರೆಸಿದರೂ, ಏನೂ ಆಗಿಲ್ಲವೆಂಬಂತೆ ನಟಿಸುತ್ತಿದ್ದರು ಅಥವಾ ಆ ರೀತಿ ಪರಿಗಣಿಸಲು ಪ್ರಯತ್ನಿಸುತ್ತಿದ್ದರು. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆದು, ಕಾಲಾನಂತರದಲ್ಲಿ ಎಲ್ಲಾ ಕೋಣೆಗಳಿಗೂ ನೀರು ತುಂಬಿ, ಅಧ್ಬುತವಾಗಿದ್ದ ಹಡಗು ನಿಧಾನವಾಗಿ ಮುಳುಗಿಹೋಯಿತು. ಜೊತೆಗೆ ಮಕ್ಕಳು, ಮಹಿಳೆಯರು, ಒಳ್ಳೆಯವರು, ಕೆಟ್ಟವರು, ರಂಧ್ರ ಕೊರೆದವರು ಮತ್ತು ಕೊರೆಯದವರು…ಪ್ರತಿಯೊಬ್ಬರೂ ಶಾಶ್ವತವಾಗಿ ಜಲಸಮಾಧಿಯಾದರು. ಬಲಿಷ್ಟವಾಗಿದ್ದ, ವೈಭವದಿಂದ ತೇಲಿದ ಒಂದು ಸುಂದರ ಹಡಗು, ಅದರ ಮೇಲಿದ್ದ ಪ್ರಯಾಣಿಕರ ದುರಾಶೆ, ಸ್ವಾರ್ಥ, ದ್ವೇಷ, ಕಲಹಗಳಿಂದ ಹಲವಾರು ರೀತಿಯಲ್ಲಿ ಛಿದ್ರವಾಗಿ, ಹಿತಿಹಾಸಕ್ಕೆ ಕುರುಹುಗಳೂ ದೊರೆಯದಂತೆ ಉಡುಗಿಹೋಯಿತು.

ಕಥೆಯನ್ನು ನಿಲ್ಲಿಸಿದ ಮುಲ್ಲ, ದೀರ್ಘ ಶ್ವಾಸ ಬಿಟ್ಟು ಕೆಲವು ಕ್ಷಣ ಮೌನವಾದನು. ಅವನ ಸುತ್ತಲೂ ಕುಳಿತ ಜನರು ಅವನನ್ನೇ ಮಿಕಿಮಿಕಿ ನೋಡುತ್ತಾ, ಎಲ್ಲೋ ಎಂದೋ ಮುಳುಗಿದ ಹಡಗಿನ ಕಥೆಯನ್ನು ಮುಲ್ಲ ನಮಗೇಕೆ ಹೇಳುತ್ತಿದ್ದಾನೆ ಎಂದು ಅರಿವಾಗದೆ ಗೊಂದಲಕ್ಕೆ ಒಳಗಾದರು. ಸುತ್ತಲಿನ ಜನರಿಗೆ ಕಥೆ ಅರ್ಥವಾಗದಿರುವುದು ಅರಿವಾಗಿ ಮೌನ ಮುರಿದ ಮುಲ್ಲ, ಕಥೆಯ ಮಾರ್ಮಿಕ ಅರ್ಥವನ್ನು ವಿವರಿಸಲು ಆರಂಭಿಸಿದ.

ಹಡಗೆಂದರೆ, ಈ ಭೂಮಿ, ನಮ್ಮ ಬದುಕು, ಜೊತೆಗೆ ಪ್ರತಿಯೊಬ್ಬರ ನೆಮ್ಮದಿ ಮತ್ತು ಸಂತೋಷ. ಸೀಮಿತ ಮನಸ್ತಿತಿಯ ಆಲೋಚನೆ, ನನ್ನದಷ್ಟೇ ಕ್ಷೇಮವಾಗಿರಲಿ ಎಂಬ ದುರಭಿಮಾನ, ಅಗತ್ಯವನ್ನು ಮೀರಿದ ಸುಖಭೋಗಗಳು, ಸ್ವಾರ್ಥದಲ್ಲೇ ಸುಖವ ಕಾಣುವ ಕಟುಕ ಮನಸ್ಸುಗಳು, ಸಿದ್ದಾಂತದ ಅಮಲೇರಿಸಿಕೊಂಡು, ಅದನ್ನು ಒಪ್ಪದವರೆಲ್ಲಾ ಅಯೋಗ್ಯರು ಎನ್ನುವ ಆಷಾಢಭೂತಿಗಳು , ನಾ ಮೇಲಿನವನು ನೀ ಕೆಳಗಿನವನು ಎಂಬ ಧೂರ್ತ ನಡೆಗಳು, ಎಲ್ಲವೂ ಒಂದಕ್ಕೊಂದು ಬೆರೆತು ಜೀವನ ಮುಳುಗಲು ತನ್ನದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತವೆ. ನಮ್ಮ ಜನಗಳ ನಡುವೆ ಜಾತಿ, ಧರ್ಮಗಳ ಕಾರಣಕ್ಕೆ ನಡೆಯುವ ಜಗಳ ವೈಷಮ್ಯಗಳು, ಇತಿಹಾಸದ ಉದ್ದಕ್ಕೂ ಅವು ಉಳಿಸುತ್ತಾ ಬಂದಿರುವ ಕಹಿ ಭಾವನೆಗಳು, ಹಾಗೆಯೇ ಅದನ್ನು ಈಗಲೂ ನಿರಂತರವಾಗಿ ಮುಂದುವರೆಸುತ್ತಿರುವ ಮನೋಭಿಪ್ರಾಯಗಳು…ಎಲ್ಲವೂ ಸೇರಿ, ಪೋಷಿತ ಅಶಾಂತಿಯನ್ನು ಉಂಟು ಮಾಡಿ, ಸಂಪೂರ್ಣ ನಾಶಕ್ಕೆ ಕಾರಣವಾಗುತ್ತವೆ.

ಹಿಂದೆ ನಡೆಯುತ್ತಿದ್ದ ರೀತಿಯೇ ನಾನು ಕೂಡ ಮಾಡಿದ್ದೇನೆ ಎನ್ನುತಾ ಬೊಕ್ಕಸಕ್ಕೆ ರಂಧ್ರ ಕೊರೆವ ಕೇಂದ್ರ ಮಂತ್ರಿ, ಮೊದಲಿದ್ದವರು ಮಾಡಿರುವುದನ್ನೇ ನಾನು ಮುಂದುವರೆಸಿದ್ದೇನೆ ಎಂದು ಗುಂಪಿನೊಡನೆ ರಾಜ್ಯವನ್ನು ಲೂಟಿ ಹೊಡೆಯುವ ಮುಖ್ಯಮಂತ್ರಿ, ಸಿಕ್ಕಿದಷ್ಟಕ್ಕೆ ತಮ್ಮನ್ನು ಮಾರಿಕೊಂಡು ನೈತಿಕತೆ, ಮೌಲ್ಯಗಳಿಗೆ ಬೆಂಕಿ ಇಡುತ್ತಾ, ಅವರು ಮಾಡುತ್ತಿದ್ದಾರಲ್ಲ…ನಾವೇಕೆ ಮಾಡಬಾರದು ಎಂದು ಪ್ರಶ್ನಿಸುವ ರಾಜಕಾರಣಿಗಳು ಜೊತೆಗೆ ಉದ್ಯಮಿಗಳು, ಪ್ರತಿಭೆಗೆ ಮತ್ತು ಯೋಗ್ಯತೆಗೆ ಹೊರತಾಗಿ ಹಲವು ಮೂರ್ಖ ಕಾರಣಗಳಿಂದ ಅಧಿಕಾರ ಹಿಡಿಯುವ ನೀತಿಕೊರರು, ಮುಕ್ತ ಮನಸ್ಸಿನಿಂದ ಯೋಚಿಸದೆ…ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಶಕ್ತಿಯಿಲ್ಲದೆ ತಮ್ಮನೇ ತಾವು ಮಾರಿಕೊಳ್ಳುವ ಮಹಾನ್ ಪ್ರಜೆಗಳು…ಎಲ್ಲರೂ ಸೇರಿ, ತಮ್ಮ ಶಕ್ತ್ಯಾನುಸಾರ ಹಡಗಿಗೆ ರಂಧ್ರ ಹೊಡೆಯುವ ಕಾರ್ಯವನ್ನು ನಿರ್ವಿಘ್ನವಾಗಿ ಮಾಡುತ್ತಿದ್ದಾರೆ.

ಎಲ್ಲರಲ್ಲೂ ವೇಗ ವೇಗ…ಆಲೋಚಿಸುವ ಶಕ್ತಿಯೇ ಅಡಗಿ ಹೋಗಿ ಅಭಿವೃದ್ದಿಯ ನೆಪದಲ್ಲಿ, ಹತ್ತಿಕುಳಿತ ಮರದ ಬುಡ ಕಡಿಯುವ ಪ್ರಯತ್ನ. ಧರ್ಮಗಳ ಸಾರವೆಲ್ಲ ಒಂದೇ ಆದರೂ ಅವುಗಳಲ್ಲೇ ಬೇಧ ಕಡೆದು ಹಿಡಿದು ಜೋತಾಡುತ್ತಾ ಇತರರನ್ನು ಬೀಳಿಸಲು ಪ್ರತಿಕ್ಷಣವೂ ಯೋಚನೆ ಮತ್ತು ಯೋಜನೆ. ಸಾವಿರ ವರ್ಷ ಬದುಕುವ ರೀತಿಯಲ್ಲಿ, ಜನರು ಮಾಡುವ ಸಂಪತ್ತಿನ ಕ್ರೂಡ್ಹೀಕರಣಕ್ಕೆ, ಮೂರ್ಖತನದ ಆಲೋಚನೆಗಳಿಗೆ, ಕುಟಿಲ ಸ್ವಾರ್ಥಕ್ಕೆ, ತಾವು ನಂಬಿರುವುದನ್ನೇ ಇತರರು ನಂಬಬೇಕು ಎನ್ನುವ ಹುಚ್ಚು ಕಲ್ಪನೆಗಳಿಗೆ ಬಲಿಯಾಗುವುದು, ಪ್ರತಿಯೊಬ್ಬರಿಗೂ ಸೇರಿದ ಹಡಗೆಂಬ ಸವಿಸುಂದರ ಬದುಕು. ಅಣು ಸ್ಪೋಟಕಗಳು, ಯುದ್ದವಿಮಾನಗಳು, ಅತ್ಯಾಧುನಿಕ ವಿನಾಶಕಾರಿ ಆಯುಧಗಳು, ಶಕ್ತಿಶಾಲಿ ಎಂದು ತೋರಿಸಲು ನಡೆಸುವ ಪ್ರದರ್ಶನಗಳು, ಕುಟಿಲ ಕಾರ್ಯ ತಂತ್ರಗಳು, ಈ ರೀತಿಯ ಪ್ರತಿಯೊಂದೂ ಕಾರ್ಯಗಳು, ಇತರರ ಮನಸ್ಸಿನಲ್ಲಿ ಅಭದ್ರತೆಯನ್ನು ಮೂಡಿಸಿ, ಅವರು ಕೂಡ ವಿನಾಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸಿದ್ದತೆ ನಡೆಸುವಂತೆ ಮಾಡುತ್ತವೆ. ಪ್ರಪಚದಲ್ಲಿರುವ ಎಲ್ಲ ವಿನಾಶಾಕಾರಿ ವಸ್ತುಗಳಿಂದ ಭೂಮಿಯನ್ನು ಸದ್ಯಕ್ಕೆ ೯೦೦ ಸಲ ನಾಶ ಮಾಡಬಹುದು…ಆದರೆ ಇದರಿಂದ ಹಡಗೆಂಬ ಭೂಮಿ ಮುಳುಗಿಹೋಗಿ ಕೊನೆಗೆ ಯಾರು ಬದುಕಿರುತ್ತಾರೆ? ಇದರಿಂದಾಗುವ ಉಪಯೋಗವೇನು? ಯಾರು ಈ ಬಗ್ಗೆ ಚಿಂತಿಸದೆ, ತಾವು ಜತೆಯಲ್ಲಿ ಮುಳುಗುವುದನ್ನು ಮರೆತು, ಇತರರನ್ನು ಮುಳುಗಿಸುವ ಪ್ರಯತ್ನದಲ್ಲೇ ಎಲ್ಲರೂ ನಿರತರಾಗಿದ್ದಾರೆ.

ನಾವು ಕೊಡುವುದನ್ನೇ ಮರಳಿ ಪಡೆಯುತ್ತೇವೆ ಎಂಬ ಸತ್ಯ ಮರೆತುಹೋಗಿ, ಈ ನಿರಂತರ ಅತ್ಯಾಚಾರಗಳ ನಡುವೆ, ಪರಸ್ಪರರಲ್ಲಿ ಕಳೆದುಕೊಳ್ಳುತ್ತಿರುವ ನಂಬಿಕೆ, ಗೌರವ, ಮುಗ್ಧ ನಗು, ಭಯವಿಲ್ಲದ ಬದುಕು ಇನ್ನಿತರ ಮೌಲ್ಯಯುತವಾದ ಜೀವನಶೈಲಿಯ ವಿಚಾರಗಳು ಯಾರ ಪರಿಗಣನೆಗೂ ನಿಲುಕುತ್ತಿಲ್ಲ. ಆದರೂ, ಸುಮಧುರ ಬಾಂಧವ್ಯ ಹಸಿರಾಗಿರಲಿ, ನಗು ಮಾಸದಿರಲಿ, ಪ್ರೀತಿ ಹರಿಯುತಿರಲಿ, ನಂಬಿಕೆಗಳು ಬೆಳೆಯಲಿ, ಮುಕ್ತ ಮನಸ್ಸು ಎಲ್ಲರದಾಗಲಿ ಎಂಬ ಆಶಯದೊಡನೆ ಮುಲ್ಲ ವಿಶ್ರಾಂತಿಗೆ ಜಾರಿದ!